ಶಿಶುಪಾಲ
	ಚೇದಿ ದೇಶದ ರಾಜ. ಧರ್ಮರಾಯ ನಡೆಸಿದ ರಾಜಸೂಯಯಾಗ ಸಂದರ್ಭದಲ್ಲಿ  ಕೃಷ್ಣನನ್ನು ವಿರೋಧಿಸಿ ಹತನಾದ. ಈತನ ಬಗೆಗೆ ಮಹಾಭಾರತ ಮತ್ತು ಭಾಗವತಗಳಲ್ಲಿ ವಿವರಗಳಿವೆ. ಶಿಶುಪಾಲ, ವಸುದೇವನ ತಂಗಿ ಶ್ರುತಶ್ರವೆ ಮತ್ತು ದಮಘೋಷರ ಮಗ. ಕೃಷ್ಣನ ಬಂಧು. ಶಿಶುಪಾಲನಿಗೆ ಸುನೀಥ, ಚೈದ್ಯ ಎಂಬ ಪರ್ಯಾಯ ನಾಮಗಳಿದ್ದುವು. ಪೂರ್ವಜನ್ಮದ ಹಿರಣ್ಯಾಕ್ಷ ಶಿಶುಪಾಲನಾಗಿ ಜನಿಸಿದನೆಂದು ಪುರಾಣಗಳಲ್ಲಿ ಉಲ್ಲೇಖಿಸಿದೆ.

	ಈತ ಹುಟ್ಟಿದಾಗ ಮೂರುಕಣ್ಣು, ನಾಲ್ಕು ಭುಜಗಳಿಂದ ಕೂಡಿದ್ದು ಕತ್ತೆಯಂತೆ ಅರಚಿದ. ಇದರಿಂದಾಗಿ ತಂದೆತಾಯಿಗಳು ಚಿಂತೆಗೀಡಾಗಿರು ವಾಗ ಇವನನ್ನು ನೋಡಿ ಭಯಪಡಬೇಡಿ ಈತ ಮುಂದೆ ಶ್ರೀಮಂತನೂ ಪರಾಕ್ರಮಿಯೂ ಆಗಿ ಪ್ರಸಿದ್ಧಿಹೊಂದುವನು. ಯಾರು ಈ ಮಗುವನ್ನು ಸ್ಪರ್ಶಿಸಿದ ಕೂಡಲೆ ಹೆಚ್ಚಾದ ಭುಜಗಳು ಮತ್ತು ಮೂರನೆಯ ಕಣ್ಣು ಮಾಯವಾಗುವವೊ ಆತನೇ ಇವನಿಗೆ ಮೃತ್ಯು ಎಂದು ಅಶರೀರವಾಣಿ ನುಡಿಯಿತು. ತಾಯಿ ಶಿಶುವನ್ನು ಮನೆಗೆ ಬಂದವರಿಗೆಲ್ಲ ಎತ್ತಿಕೊಳ್ಳಲು ಕೊಡುತ್ತಿದ್ದಳು. ಒಂದು ದಿನ ಕೃಷ್ಣ ಮತ್ತು ಬಲರಾಮರು ಅತ್ತೆ ಶ್ರುತಶ್ರವೆಯ ಮನೆಗೆ ಬಂದರು. ಶಿಶುಪಾಲ ಕೃಷ್ಣನ ತೊಡೆಯನ್ನು ಏರಿದಕೂಡಲೆ ಎರಡು ಭುಜ ಮತ್ತು ಮೂರನೆಯ ಕಣ್ಣು ಮಾಯವಾದವು. ತಾಯಿಗೆ ಒಂದು ಕ್ಷಣ ಸಂತಸವಾಯಿತು ಮರುಕ್ಷಣವೇ ಕೃಷ್ಣನೇ ತನ್ನ ಮಗುವಿನ ವೈರಿಯಾಗುವನೆಂದು ತಿಳಿದು ದುಃಖಿಸಿದಳು. ನನ್ನ ಮಗ ನಿನ್ನ ವಿಷಯದಲ್ಲಿ ಯಾವ ಅಪರಾಧವನ್ನು ಮಾಡಿದರೂ ಕ್ಷಮಿಸಬೇಕೆಂದು ಕೃಷ್ಣನನ್ನು ಬೇಡಿದಳು. ನಿನ್ನ ಮಗನು ಕೊಲೆಗೆ ಸಮನಾದ ನೂರು ತಪ್ಪುಗಳನ್ನು ಮಾಡಿದರೂ ಮನ್ನಿಸುವೆನೆಂದು ಕೃಷ್ಣ ಆಶ್ವಾಸನೆಯಿತ್ತ.

	ಧರ್ಮರಾಜ ರಾಜಸೂಯಯಾಗದಲ್ಲಿ ಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಿದ್ದರಿಂದ ಶಿಶುಪಾಲ ಕುಪಿತನಾದ. ತುಂಬಿದ ಸಭೆಯಲ್ಲಿ ಕೃಷ್ಣನನ್ನು ವಾಚಾಮಗೋಚರವಾಗಿ ನಿಂದಿಸಿ ಸಭಾತ್ಯಾಗ ಮಾಡಲನುವಾದ. ಧರ್ಮರಾಜ ಸಮಾಧಾನ ಪಡಿಸಿದರೂ ಶಿಶುಪಾಲ ಕೃಷ್ಣನನ್ನು ಹೀಯಾಳಿಸುತ್ತ ಕಾಳಗಕ್ಕೆ ನಿಂತ. ಕೃಷ್ಣನಾದರೋ ಶಿಶುಪಾಲ ಈ ಹಿಂದೆ ಮಾಡಿದ್ದ ನೂರು ತಪ್ಪುಗಳನ್ನು ಕ್ಷಮಿಸಿದ್ದ. ಆದರೆ ಯಾಗಕ್ಕೆ ವಿಘ್ನಪಡಿಸುವುದನ್ನು ಮತ್ತು ಪಾಂಡವರ ವಿರೋಧಿಯಾಗಿರುವುದನ್ನು ಕೃಷ್ಣ  ಸಹಿಸದಾದ.  ಶಿಶುಪಾಲ ಕೃಷ್ಣನ ಮೇಲೆ ಬಿದ್ದ.  ಕೃಷ್ಣ ಚಕ್ರಾಯುಧದಿಂದ ಶಿಶುಪಾಲನ ತಲೆಯನ್ನು ಕತ್ತರಿಸಿದ. ಶಿಶುಪಾಲನ ತರುವಾಯ ಆತನ ಮಕ್ಕಳಾದ ಸುಕೇತು, ದೃಷ್ಟಕೇತು, ಶರಭ ಎನ್ನುವವರು ಭಾರತಯುದ್ಧದಲ್ಲಿ ಪಾಂಡವರ ಪರವಾಗಿದ್ದರು.

	ಮಹಾಭಾರತದಲ್ಲಿ ಬರುವ ಶಿಶುಪಾಲನ ವಧಾಪ್ರಸಂಗದಿಂದ ಸ್ಫೂರ್ತಿ ಪಡೆದು ಅನೇಕ ಕಾವ್ಯ, ನಾಟಕಗಳು ರಚಿತವಾಗಿವೆ. ಮಾಘಕವಿ ಸಂಸ್ಕøತದಲ್ಲಿ ಶಿಶುಪಾಲವಧ ಎಂಬ ಇಪ್ಪತ್ತು ಸರ್ಗಗಳ ಮಹಾಕಾವ್ಯ ವನ್ನು ರಚಿಸಿದ್ದಾನೆ. ಕನ್ನಡದಲ್ಲಿ ಶಿಶುಪಾಲನ ವಧೆಯನ್ನು ಆಧರಿಸಿದ ರಾಜಸೂಯಯಾಗ ಎಂಬ ರಂಗಭೂಮಿ ನಾಟಕ ಯಶಸ್ವಿಯಾಗಿದೆ.		
	(ವೈ.ಸಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ